ದುರಂಟಾ -
ವರ್ಬಿನೇಸಿ ಕುಟುಂಬಕ್ಕೆ ಸೇರಿದ ಒಂದು ಗಿಡ. ಈ ಜಾತಿಯಲ್ಲಿ ಹಲವಾರು ಪ್ರಭೇದಗಳಿವೆ. ಇವುಗಳಲ್ಲಿ ದುರಂಟಾ ರೆಪೆನ್ಸ್ ಎಂಬುದನ್ನು ಭಾರತದಲ್ಲಿ ಅಲಂಕಾರ ಗಿಡವಾಗಿ ಬೇಲಿಯಲ್ಲಿ ಬೆಳೆಸಿದ್ದಾರೆ.  ಇದು ಸದಾ ಹಸಿರಾಗಿದ್ದು 3-6ಮೀ ಎತ್ತರಕ್ಕೆ ಬೆಳೆಯುತ್ತದೆ. ಕೆಲವೊಮ್ಮೆ ಪೊದೆವಾಗಿಯೂ ಬೆಳೆಯುವುದುಂಟು. ಇದರ ರೆಂಬೆಗಳಲ್ಲಿ ಮುಳ್ಳುಗಳುಂಟು. ಎಲೆಗಳು ಸರಳ; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ; ಇವುಗಳ ಆಕಾರ ಅಂಡದಂತೆ, ಹೂಗಳು ರೆಸಿóೀಮ್ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಇವುಗಳ ಬಣ್ಣ ನೀಲಿ ಬಿಳಿ ಅಥವಾ ಕೆಂಪುಮಿಶ್ರಿತ ನೀಲಿ. ಪುಷ್ಪಪಾತ್ರೆ ಮತ್ತು ದಳಗಳ ಸಂಖ್ಯೆ 4-5. ಕೇಸರಗಳು- 4 ದಳಗಳ ಒಳಭಾಗಕ್ಕೆ ಅಂಟಿಕೊಂಡಿವೆ. ಅಂಡಾಶಯದಲ್ಲಿ 2 ಕಾರ್ಪೆಲ್‍ಗಳಿದ್ದು. 2-4 ಕೋಣೆಗಳು ಮತ್ತು ಪ್ರತಿ ಕೋಣೆಗಳಲ್ಲಿ 1-2 ಅಂಡಕಗಳುಂಟು. ಹಣ್ಣು ಸಂಪುಟ ಮಾದರಿಯದು. ಕಾಯಿಗಳು ಗುಂಡನೆಯ ಆಕಾರದವು; ಇವುಗಳ ಬಣ್ಣ ಹೊಳೆಯುವ ಕಿತ್ತಳೆ.

ದುರಂಟಾವನ್ನು ಎಲ್ಲಾ ತರಹದ ಹವಾಮಾನದಲ್ಲಿ ಮತ್ತು ಭೂಮಿಯಲ್ಲಿ ಬೆಳೆಸಬಹುದು. ಇದನ್ನು ಸಾಮಾನ್ಯವಾಗಿ ಬೀಜಗಳಿಂದ ಇಲ್ಲವೆ ಕಾಂಡತುಂಡುಗಳಿಂದ ಬೆಳೆಸಲಾಗುತ್ತದೆ.

ಇದು ಬಹಳ ಒತ್ತೊತ್ತಾಗಿ, ಬಲಿಷ್ಠವಾಗಿ ಬೆಳೆಯುವುದರಿಂದ ಬೇಲಿ ಬಹಳ ಸುಭದ್ರವಾಗಿರುತ್ತದೆ. ಈ ಗಿಡವನ್ನು ದನಕರುಗಳು ತಿನ್ನುವುದಿಲ್ಲ.  ಇದರ ಎಲೆಗಳಲ್ಲಿ ಸೋಪಿನಂಥ ಪದಾರ್ಥವೂ  ಕಾಯಿಗಳಲ್ಲಿ ಕ್ಷಾರ ಪದಾರ್ಥವೂ ಇವೆ. ಕಾಯಿಗಳ ರಸಕ್ಕೆ ಕೀಟನಾಶಕ ಗುಣ ಉಂಟು. ಸೊಳ್ಳೆಗಳ ಡಿಂಬಗಳನ್ನು ನಾಶಮಾಡಲು ಈ ರಸವನ್ನು ಉಪಯೋಗಿಸುತ್ತಾರೆ. ಆದರೆ ಕ್ಯೂಲೆಕ್ಸ್ ಸೊಳ್ಳೆಯ ಡಿಂಬಗಳ ಮೇಲೆ ಇದು ಪ್ರಭಾವಶಾಲಿಯಲ್ಲ.

ದುರಂಟಾದ ಪೊದೆಯ ಬಣ್ಣ ಹಸಿರು ಅಥವಾ ಊದಾ ಕಂದು. ಗಟ್ಟಿಯಾಗಿಯೂ ಭಾರವಾಗಿಯೂ ಇದ್ದು ಮರಗೆಲಸಕ್ಕೆ ಒಗ್ಗುತ್ತದೆ. ಇದರಿಂದ ಕೆಲವಾರು ಆಟಿಕೆಗಳನ್ನು ತಯಾರಿಸುವುದಿದೆ. 
(ಕೆ.ಎಸ್.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ